ಕಡ್ಡಾಯ ಶಿಕ್ಷಣ : ಒಂದು ನಿರ್ದಿಷ್ಟ ವಯೋವರ್ಗದ ಮಕ್ಕಳು ಶಾಲೆಗೆ ಹಾಜರಾಗುವ ಅಗತ್ಯವನ್ನು ರಾಜ್ಯಶಾಸನದ ಮೂಲಕ ಕಡ್ಡಾಯ ಮಾಡುವ ಒಂದು ವ್ಯವಸ್ಥೆ; ಹಾಗೆ ಮಕ್ಕಳು ಹಾಜರಾಗುವಂತೆ ಮಾಡುವ ಒಂದು ವ್ಯವಸ್ಥೆ; ಹಾಗೆ ಮಕ್ಕಳು ಹಾಜರಾಗುವಂತೆ ಮಾಡುವ 

ಹೊಣೆಗಾರಿಕೆ ಸಾಮಾನ್ಯವಾಗಿ ತಂದೆತಾಯಿಗಳಿಗೂ ಪೋಷಕರಿಗೂ ಸಲ್ಲುತ್ತದೆ. ಜೊತೆಗೆ ಆ ಪದ್ದತಿಯನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಲು ಶಿಕ್ಷಣಶಾಖೆ ಹಾಜರಾತಿ ಅಧಿಕಾರಿ ಮೊದಲಾದ ಅಗತ್ಯ ಸಿಬ್ಬಂದಿಯನ್ನು ಒದಗಿಸುತ್ತದೆ. ಶಾಲೆಗೆ ಹಾಜರಾಗಲಿ, ಆಗದಿರಲಿ, 

12ನೆಯ ವರ್ಷದೊಳಗಾಗಿ ಮಕ್ಕಳಿಗೆ ಓದು ಬರೆಹ ಕಲಿಸಿರಬೇಕೆಂದು ಹಿಂದೆ ಸಮಾಜದಲ್ಲಿ ಪ್ರಚಾರದಲ್ಲಿದ್ದ ಒಂದು ಸಂಪ್ರದಾಯ; ಶಿಕ್ಷಣ ತನ್ನ ಹೊಣೆಗಾರಿಕೆಯಾಗಿರುವ ರಾಜ್ಯಸರ್ಕಾರ ನಿರ್ದಿಷ್ಟಗೊಳಿಸಿದ ವಯೋವರ್ಗದ ಮಕ್ಕಳಿಗೆಲ್ಲ ಶಿಕ್ಷಣಸೌಲಭ್ಯವನ್ನೊದಗಿಸಬೇಕೆಂಬ 

ರಾಜ್ಯಾಂಗ ರಚನೆ ಅಥವಾ ಕೇಂದ್ರ ಸರ್ಕಾರ ವಿಧಿಸಿರುವ ಒಂದು ಕಡ್ಡಾಯ ಕರ್ತವ್ಯ.
ಕಡ್ಡಾಯ ಶಿಕ್ಷಣದ ಆವಶ್ಯಕತೆ : ಒಂದು ದೇಶದ ಸಂಪತ್ತು ಅಲ್ಲಿನ ಧನಧಾನ್ಯವಲ್ಲ-ಆ ದೇಶದ ಮಕ್ಕಳು-ಅವರ ದೇಹ ಮತ್ತು ಮನಸ್ಸು. ಆದ್ದರಿಂದ ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ಮಕ್ಕಳ ಶಿಕ್ಷಣವೇ ಪ್ರಥಮ ಹಂತ. ಎಲ್ಲ ಮಕ್ಕಳಿಗೂ ಅಗತ್ಯವಾಗಿ ಶಿಕ್ಷಣ ದೊರೆತರೆ 

ಅವರಲ್ಲಿ ಹುದುಗಿರುವ ಶಕ್ತಿ ಸಾಮಥರ್ಯ್‌ಗಳು ಪುರ್ಣವಾಗಿ ವಿಕಾಸಗೊಳ್ಳುತ್ತವೆ. ಆಗ ಅವರು ರಾಷ್ಟ್ರದ ಇನ್ನಿತರ ಸಂಪನ್ಮೂಲಗಳನ್ನು ಬಳಸಿಕೊಂಡು, ಜನಾಂಗದ ಸಂಸ್ಕೃತಿ ಸಂಪ್ರದಾಯಗಳನ್ನು ಅರಿತುಕೊಂಡು ಜೀವನ ಪ್ರಗತಿಯನ್ನು ಸಾಧಿಸಬಲ್ಲರು; ಎಲ್ಲರೂ ತಮ್ಮ 

ಹಕ್ಕುಬಾಧ್ಯತೆಗಳನ್ನು ಅರಿತುಕೊಂಡು ಪ್ರಜಾಪ್ರಭುತ್ವದಲ್ಲಿ ಯಶಸ್ವಿ ಪೌರರಾಗಿಯೊ ನಾಯಕರಾಗಿಯೊ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಶಕ್ತರಾಗುವರು. ಅಷ್ಟೇ ಅಲ್ಲ. ಅಂಥ ಶಿಕ್ಷಿತ ಜನತೆ ರಾಷ್ಟ್ರದ ಆರ್ಥಿಕ ಜೀವನದಲ್ಲಿ ಬುದ್ಧಿವಂತಿಕೆಯಿಂದ ಪಾತ್ರವಹಿಸುತ್ತ ರಾಷ್ಟ್ರದ 

ಐಕ್ಯ ಮತ್ತು ರಕ್ಷಣೆಗಳಿಗೂ ನೆರವಾಗಬಲ್ಲುದು. ಆದರೆ ಆ ಕಾರ್ಯಸಾಧನೆಗೆ ಪ್ರಥಮತಃ ಪ್ರತಿಯೊಬ್ಬನೂ ಪ್ರಾಥಮಿಕ ದರ್ಜೆಯ ಶಿಕ್ಷಣವನ್ನಾದರೂ ಮುಗಿಸಿರಬೇಕು. ಅದರ ಆಧಾರದ ಮೇಲೆ ಮುಂದೆ ವ್ಯಕ್ತಿ ಹೆಚ್ಚಿನ ಶಿಕ್ಷಣ ಸಾಧಿಸಿದಲ್ಲಿ ನಾಡು ಅಭಿವೃದ್ಧಿ ಮುಖದಲ್ಲಿ 

ಸಾಗುವಂತಾಗುತ್ತದೆ. ಪ್ರಾಥಮಿಕ ಶಿಕ್ಷಣದಿಂದ ಪಡೆದ ಅಕ್ಷರಜ್ಞಾನ ಮಾಸದೆ ಉಳಿದು ಫಲಕಾರಿಯಾಗಬೇಕಾದರೆ 4-5 ವರ್ಷಗಳವರೆಗಾದರೂ ಆ ಶಿಕ್ಷಣ ಎಲ್ಲರಿಗೂ ಕಡ್ಡಾಯವಾಗಿ ದೊರಕಬೇಕು. ಅಲ್ಲದೆ, ಅವರು ಮಧ್ಯೆ ಶಾಲೆಯನ್ನು ಬಿಟ್ಟರೆ ಕಲಿತದ್ದು ಮರೆತುಹೋಗಿ 

ಅವರೆಲ್ಲ ಮತ್ತೆ ಅನಕ್ಷರಸ್ಥರಾಗುವರು. ಶಿಕ್ಷಣಕ್ಕಾಗಿ ದುಡಿದ ಜನ, ಧನ ಎಲ್ಲ ವ್ಯರ್ಥವಾಗುವುದು. ಅದನ್ನು ತಪ್ಪಿಸಿ, ಮುಂದಿನ ಜನತೆ ಅಕ್ಷರಸ್ಥರೂ ವಿದ್ಯಾವಂತರೂ ಆಗಿದ್ದು ರಾಷ್ಟ್ರದ ಹಿತ ಮತ್ತು ಭದ್ರತೆಗೆ ನೆರವಾಗುವಂತೆ ನೋಡಿಕೊಳ್ಳಲೆಂದೇ ಕಡ್ಡಾಯ ಶಿಕ್ಷಣ ಆಚರಣೆಗೆ 

ಬರುತ್ತಿರುವುದು.
ಕಡ್ಡಾಯ ಶಿಕ್ಷಣವನ್ನು ಮೊದಲು ಆಚರಣೆಗೆ ತಂದ ಜನಾಂಗಗಳು: ದೇಶದ ಪ್ರಗತಿ ಮತ್ತು ರಕ್ಷಣೆ ಕಡ್ಡಾಯ ಶಿಕ್ಷಣವನ್ನು ಅವಲಂಬಿಸಿರುವ ಅಂಶವನ್ನು ಮೊಟ್ಟಮೊದಲು ಅರಿತುಕೊಂಡ ಕೀರ್ತಿ ಜರ್ಮನಿಗೆ ಸಲ್ಲುತ್ತದೆ. 1763ರಲ್ಲೇ ಅಲ್ಲಿನ (ಪ್ರಷ್ಯದ) ಸರ್ಕಾರ ಆ ತತ್ತ್ವದೃಷ್ಟಿಯನ್ನು 

ಒಪ್ಪಿಕೊಂಡು ಕಾಲಕ್ರಮದಲ್ಲಿ 14ನೆಯ ವಯಸ್ಸಿನವರೆಗಿನ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯ ಮಾಡಿತು. ಅನಂತರ ಅದನ್ನು 16ನೆಯ ವಯಸ್ಸಿನ ತನಕ ವಿಸ್ತರಿಸಿತಲ್ಲದೆ 18ನೆಯ ವಯಸ್ಸಿನವರೆಗೆ ಭಾಗಶಃ ಶಿಕ್ಷಣವನ್ನೂ ಕಡ್ಡಾಯ ಮಾಡಿತು. ಜರ್ಮನಿಯ 

ಮೇಲ್ಪಂಕ್ತಿಯನ್ನನುಸರಿಸಿ ಜಪಾನ್ 1872ರಲ್ಲಿ ರಾಜ್ಯದ ಎಲ್ಲ ಮಕ್ಕಳೂ 6 ವರ್ಷಗಳ ಕಡ್ಡಾಯ ಶಿಕ್ಷಣ ಪಡೆಯಬೇಕೆಂದು ಶಾಸನ ಮಾಡಿತು. 1945ರಲ್ಲಿ ಅದನ್ನು 9 ವರ್ಷಗಳ ಕಾಲಾವಧಿಗೆ ವಿಸ್ತರಿಸಿತು. ಈ ಶತಮಾನದ ಪ್ರಥಮಾರ್ಧದ ವೇಳೆಗೆ ಆ ವಯೋಮಾನದ 

ಮಕ್ಕಳಲ್ಲಿ ಶೇ. 99.5ರಷ್ಟು ಆ ಯೋಜನೆಯ ವ್ಯಾಪ್ತಿಗೆ ಬರುವಂತಾಯಿತು. ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತಂದ ಜರ್ಮನಿ ಬಹುಬೇಗ ಅಭಿವೃದ್ಧಿ ಸಾಧಿಸಿದ್ದನ್ನು ಕಂಡು ಇತರ ಪಾಶ್ಚಾತ್ಯ ರಾಷ್ಟ್ರಗಳೂ ಆ ಮುಖವಾಗಿ ಹೆಜ್ಜೆಯಿಡಲಾರಂಭಿಸಿದುವು. ಇಂಗ್ಲೆಂಡ್ 

1880ರಿಂದ 6 ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮಾಡಿತು. ಅನಂತರ ಆ ಯೋಜನೆಯನ್ನು 14ನೆಯ ಮಯಸ್ಸಿನವರೆಗೂ ವಿಸ್ತರಿಸಿತು. 1939ರಲ್ಲಿ ಅದನ್ನು 15ನೆಯ ವಯಸ್ಸಿಗೆ ಹೆಚ್ಚಿಸಲು ಯತ್ನಿಸಿತು. ಆ ವೇಳೆಗೆ ಯುದ್ಧ ಆರಂಭವಾಗಿ ಆ ಕಾರ್ಯವನ್ನು 

1944ರವರೆಗೂ ಮುಂದೂಡಬೇಕಾಯಿತು. ಸದ್ಯದಲ್ಲಿ ಆ ವಯೋಮಿತಿಯನ್ನು 16ನೆಯ ವಯಸ್ಸಿಗೆ ವಿಸ್ತರಿಸುವ ಯತ್ನ ನಡೆದಿದೆ. ಫ್ರಾನ್ಸ್‌ 1882ರಲ್ಲಿ 6 ವರ್ಷ ಕಾಲದ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತಂದಿತು. 1936ರಲ್ಲಿ ಅದರ ಅವಧಿಯನ್ನು 14ನೆಯ 

ವರ್ಷದವರೆಗೆ ವಿಸ್ತರಿಸಿತು. 1959ರಲ್ಲಿ ಮತ್ತೆ ಅದನ್ನು 16ನೆಯ ವಯಸ್ಸಿನವರೆಗೆ ವಿಸ್ತರಿಸಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಶತಮಾನದ ಕೊನೆ ಕೊನೆಯ ಹೊತ್ತಿಗೆ ಎಲ್ಲ ರಾಜ್ಯಗಳೂ 6 ವರ್ಷಗಳ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತಂದುವು. ಆ ಕಾಲಾವಧಿ ಈ 

ಶತಮಾನದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ವಯೋಮಿತಿಯವರೆಗೆ ಹೆಚ್ಚುತ್ತ ಬಂದಿದೆ.
ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವುದರಲ್ಲಿ ಜರ್ಮನಿ ಪಾಶ್ಚಾತ್ಯ ರಾಷ್ಟ್ರಗಳಿಗೆ ಮೇಲ್ಪಂಕ್ತಿಯಾದಂತೆ ಪ್ರಾಚ್ಯದೇಶಗಳಿಗೆ ಜಪಾನ್ ಮೇಲ್ಪಂಕ್ತಿಯಾಯಿತು. ಕಮ್ಯೂನಿಸ್ಟ್‌ ಸರ್ಕಾರದ ನೇತೃತ್ವದಲ್ಲಿ ರಷ್ಯ ಒಂದು ಕಡೆ ಕಡ್ಡಾಯ ಶಿಕ್ಷಣವನ್ನೂ ಇನ್ನೊಂದು ಕಡೆ ವಯಸ್ಕರ 

ಶಿಕ್ಷಣವನ್ನೂ ಏಕಕಾಲದಲ್ಲಿ ಆರಂಭ ಮಾಡಿತು. 1954ರ ವೇಳೆಗೆ ರಾಷ್ಟ್ರಾದ್ಯಂತ 7-15 ವರ್ಷದವರೆಗಿನ ಎಂದರೆ 8 ವರ್ಷಗಳ ಕಾಲಾವಧಿಯ ಶಿಕ್ಷಣವನ್ನು ಕಡ್ಡಾಯ ಮಾಡಿತು. ಚೀನವೂ 1937ರಲ್ಲಿ ರಾಷ್ಟ್ರದ 6-11ರ ವಯೋಮಿತಿಯ ಮಕ್ಕಳಲ್ಲಿ ಸು. ಶೇ.45ರಷ್ಟನ್ನು ಶಾಲೆಗೆ 

ಸೇರುವಂತೆ ಮಾಡಿ ಕ್ರಮಕ್ರಮವಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕಡ್ಡಾಯ ಶಿಕ್ಷಣ ಯೋಜನೆಗೆ ಒಳಪಡಿಸಿದುದಲ್ಲದೆ ಅದರ ಅವಧಿಯನ್ನೂ ಹೆಚ್ಚಿಸುತ್ತ ಬಂದಿದೆ.
ಭಾರತದಲ್ಲಿ ಕಡ್ಡಾಯ ಶಿಕ್ಷಣ: 1947ರವರೆಗೂ ಇದ್ದ ಬ್ರಿಟಿಷ್ ಪ್ರಭುತ್ವ ಕಡ್ಡಾಯ ಶಿಕ್ಷಣದ ಕಡೆ ಗಮನ ಕೊಡಲಿಲ್ಲ. ಈ ಶತಮಾನದ ಆದಿಯಿಂದಲೂ ರಾಷ್ಟ್ರದ ನಾಯಕರು ಆ ಮುಖವಾಗಿ ಯತ್ನವನ್ನೇನೊ ನಡೆಸುತ್ತ ಬಂದಿದ್ದರು. ಗೋಖಲೆಯವರು 1911ರಲ್ಲಿ ಇಡೀ ಭಾರತದಲ್ಲಿ 

ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರಬೇಕೆಂದು ಕೇಂದ್ರ ಶಾಸನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದ್ದರು. ಆರ್ಥಿಕ ಕಾರಣಗಳಿಂದಾಗಿ ಸರ್ಕಾರ ಅದನ್ನು ಅಂಗೀಕರಿಸಲಿಲ್ಲ. ಅನಂತರ 1937ರಲ್ಲಿ ರೂಪುಗೊಂಡ ಗಾಂಧೀಜಿಯವರ ವರ್ಧಾ ಶಿಕ್ಷಣ ಯೋಜನೆಯೂ 7-14 

ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣವನ್ನು ಪ್ರತಿಪಾದಿಸಿತು. ಅನಂತರ 1944ರಲ್ಲಿ ರಚಿಸಿದ ಸಾರ್ಜಂಟ್ ಸಮಿತಿಯೂ ರಾಷ್ಟ್ರಾದ್ಯಂತ 14ನೆಯ ವಯಸ್ಸಿನವರೆಗೂ ಸಾರ್ವತ್ರಿಕವಾಗಿ ಕಡ್ಡಾಯ ಶಿಕ್ಷಣವನ್ನು ಸಲಹೆ ಮಾಡಿ ಅದನ್ನು ಹಂತಹಂತಗಳಲ್ಲಿ 

ಆಚರಣೆಗೆ ತರಲು 40 ವರ್ಷಗಳ ಒಂದು ಯೋಜನೆಯನ್ನು ರೂಪಿಸಿತು. ರಾಷ್ಟ್ರದ ನಾಯಕರನೇಕರು ಅದು ಕೇವಲ ಕಣ್ಣೊರೆಸುವ ಯೋಜನೆಯೆಂದು ತಿರಸ್ಕರಿಸಿದರು. ಅನಂತರ ರಾಷ್ಟ್ರದ ಪ್ರಗತಿಗೆ ಕಡ್ಡಾಯ ಶಿಕ್ಷಣದ ಅಗತ್ಯವನ್ನು ಮನಗಂಡು ಸ್ವತಂತ್ರ ಭಾರತ ಅದನ್ನು 

ಆಚರಣೆಗೆ ತರಲು ಅಲ್ಲಲ್ಲಿ ಪ್ರಯತ್ನ ನಡೆಸಿತು. 1950ರಲ್ಲಿ ರೂಪುಗೊಂಡ ರಾಜ್ಯಾಂಗ ರಚನೆಯಲ್ಲಿ ಎಲ್ಲ ರಾಜ್ಯಗಳೂ ಹತ್ತು ವರ್ಷಗಳ ಅವಧಿಯಲ್ಲಿ 14ನೆಯ ವಯಸ್ಸಿನವರೆಗಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣದ ಸೌಲಭ್ಯವೊದಗಿಸಬೇಕೆಂದು ನಿರ್ದಿಷ್ಟ ಆದೇಶವನ್ನು 

(ಆರ್ಟಿಕಲ್ 45) ಅಳವಡಿಸಲಾಯಿತು. ಆ ಸುಮಾರಿಗೆ ಭಾರತ ದೇಶದ ವಿಭಜನೆಯ ಫಲವಾಗಿ ಉದ್ಭವಿಸಿದ ನಿರ್ವಸತಿಕರು, ಆಹಾರಾಭಾವ ಇತ್ಯಾದಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಜೊತೆಗೆ ಆಗ ತಾನೆ ಆರಂಭಿಸಲಾಗಿದ್ದ ಪಂಚವಾರ್ಷಿಕ ಯೋಜನೆಗೆ 

ಹಣ ಒದಗಿಸಬೇಕಾಯಿತು. ರಾಷ್ಟ್ರದ ಔದ್ಯೋಗೀಕರಣಕ್ಕೆ ಅಗತ್ಯವಾದ ತಾಂತ್ರಿಕ ಶಕ್ತಿಯನ್ನು ಹೆಚ್ಚಿಸಲು ತಾಂತ್ರಿಕ ಮತ್ತು ಔದ್ಯೋಗಿಕ ಶಿಕ್ಷಣದ ಕಡೆ ಗಮನ ಕೊಡಬೇಕಾಯಿತು. ಪರದೇಶಗಳಿಂದ ಯಂತ್ರೋಪಕರಣಗಳನ್ನು ಕೊಳ್ಳಲು ಅಗಾಧ ಪ್ರಮಾಣದಲ್ಲಿ ಹಣವನ್ನು 

ಹೂಡಬೇಕಾಗಿ ಬಂತು. ಇವೆಲ್ಲ ಕಾರಣಗಳಿಂದ ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣಕ್ಕಾಗಿ ತಕ್ಕಷ್ಟು ಹಣ ಒದಗಿಸಲಾರದಾಯಿತು. ರಾಜ್ಯಾಂಗ ರಚನೆ ತಮಗೆ ನಿರ್ದೇಶಿಸಿದ ಆ ಕಾರ್ಯವನ್ನು ನಿರ್ವಹಿಸಲು ತ್ರಿಕರಣಪುರ್ವಕವಾಗಿ ರಾಜ್ಯಸರ್ಕಾರಗಳು ಯತ್ನಿಸಿದರೂ ಅದನ್ನು 

ಆಚರಣೆಗೆ ತರುವುದು ಅಸಾಧ್ಯವಾಯಿತು. ಸಾಲದ್ದಕ್ಕೆ ಜನಸಂಖ್ಯೆಯೂ ತೀವ್ರಗತಿಯಲ್ಲಿ ಹೆಚ್ಚಿ, ಕಡ್ಡಾಯ ಶಿಕ್ಷಣದ ವಯೋಮಿತಿಯ ಮಕ್ಕಳ ಸಂಖ್ಯೆ ಅಧಿಕವಾಗುತ್ತ ಬಂತು. ಅವರಿಗೆಲ್ಲ ಉಚಿತ ಪ್ರಾಥಮಿಕ ಶಿಕ್ಷಣ ದೊರಕಿಸಲು ಧನದ ಅಭಾವ, ಕಟ್ಟಡ ಮತ್ತು ಅಧ್ಯಾಪಕರ 

ಕೊರತೆ-ಇವೆಲ್ಲ ರಾಜ್ಯಗಳ ಯತ್ನಕ್ಕೆ ಅಡ್ಡಿಯಾಗಿ ನಿಂತುವು. ಅನಕ್ಷರಸ್ಥ ತಂದೆತಾಯಿಗಳಿಗೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಇದ್ದ ನಿರಾಸಕ್ತಿ, ಅವರ ಬಡತನ, ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸದ ಸಂಪ್ರದಾಯ-ಇವೆಲ್ಲ ಕಾರಣಗಳಿಂದ ಯೋಜನೆಯನ್ನು ಹಾಗೂ ಹೀಗೂ 

ಆಚರಣೆಗೆ ತಂದ ರಾಜ್ಯಗಳಲ್ಲೂ ತಕ್ಕಷ್ಟು ಯಶಸ್ಸು ಸಾಧಿಸಲಾಗಲಿಲ್ಲ. ರಾಜ್ಯಾಂಗದಲ್ಲಿ ಉಲ್ಲೇಖವಾಗಿದ್ದ ಆಶಯ ಈಡೇರಲಾರದಾಯಿತು. ಇದನ್ನು ಕಂಡ ರಾಷ್ಟ್ರ 1960ರಿಂದ ಮತ್ತೆ ಹೆಚ್ಚಿನ ದೃಢತೆಯಿಂದ ಆ ಕಾರ್ಯ ಸಾಧಿಸಲು ಯತ್ನಿಸಿತು. ಪ್ರತಿ ಜಿಲ್ಲೆಯಲ್ಲೂ ಬರುವ 

ವರ್ಷ ಶಾಲೆಗೆ ಸೇರಬೇಕಾದ ಮಕ್ಕಳ ಸಂಖ್ಯೆ, ಅದಕ್ಕಾಗಿ ಬೇಕಾಗುವ ಕಟ್ಟಡಗಳು, ಅಧ್ಯಾಪಕರು ಇತ್ಯಾದಿ ಅಂಶಗಳನ್ನೊಳಗೊಂಡಂತೆ ಎಲ್ಲ ರಾಜ್ಯಗಳಲ್ಲೂ ಸಮೀಕ್ಷೆ ನಡೆಸಲಾಯಿತು. ಅದಕ್ಕೆ ಅಗತ್ಯವಾದ ಧನಸಹಾಯವನ್ನು ಕೇಂದ್ರ ಸರ್ಕಾರ ಒದಗಿಸಿತು. 14ನೆಯ 

ವಯಸ್ಸಿನವರೆಗಿನ ಶಿಕ್ಷಣವನ್ನು ಅಂತಿಮವಾಗಿ ಕಡ್ಡಾಯ ಮಾಡುವ ಉದ್ದೇಶವನ್ನು ಮುಂದಿಟ್ಟುಕೊಂಡಿದ್ದರೂ ಸದ್ಯಕ್ಕೆ ಅನೇಕ ರಾಜ್ಯಗಳು 5 ಅಥವಾ 6-11ನೆಯ ವರ್ಷದ ವರೆಗಿನ ಶಿಕ್ಷಣವನ್ನು ಮಾತ್ರ ಕಡ್ಡಾಯ ಮಾಡಲು ಉಪಕ್ರಮಿಸಿದುವು.
ಕಡ್ಡಾಯ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು : ರಾಷ್ಟ್ರಾದ್ಯಂತ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಾಗ ಹಲವಾರು ಎಡರುತೊಡರುಗಳೂ ಸಮಸ್ಯೆಗಳೂ ಅಡ್ಡ ಬರುತ್ತವೆ. ಅವುಗಳಲ್ಲಿ ಮುಖ್ಯವಾದವನ್ನು ಇಲ್ಲಿ ಪರಿಶೀಲಿಸಬಹುದು.
1. ಕುಟುಂಬ ಜೀವನದ ಕಷ್ಟಕಾರ್ಪಣ್ಯಗಳು: ತಂದೆತಾಯಿಗಳ ಆರ್ಥಿಕ ದುಸ್ಥಿತಿ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಾಗ ಬರುವ ಮೊದಲ ಅಡಚಣೆ. ಗ್ರಾಮಾಂತರ ಪ್ರದೇಶಗಳಲ್ಲಿ ತಂದೆತಾಯಿಗಳು ಮನೆಗೆಲಸಕ್ಕೂ ಜೀವನೋಪಾಯದ ಕಸಬುಗಳಿಗೂ ಮಕ್ಕಳ 

ಸೇವೆಯನ್ನು ಬಳಸಿಕೊಳ್ಳುವುದು ಸ್ವಾಭಾವಿಕ. ಮಕ್ಕಳ ಹಿತದೃಷ್ಟಿಯಿಂದ ಇದು ಉಚಿತವಲ್ಲ. ಆ ಬಗ್ಗೆ ರಾಜ್ಯ ಶಾಸನ ಮಾಡಿದರೂ ಅದು ತಪ್ಪುವುದಿಲ್ಲ. ತಮಗೆ ಎಷ್ಟೇ ಕಷ್ಟಗಳಿದ್ದರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂಬ ಪ್ರಜ್ಞೆ ತಂದೆತಾಯಿಗಳಲ್ಲಿ ಮೂಡಬೇಕು. ಆ 

ಬಗ್ಗೆ ಪ್ರಚಾರ, ಪ್ರೋತ್ಸಾಹ ಅನಿವಾರ್ಯವಾದಾಗ ದಂಡ, ಇವೆಲ್ಲ ಅಗತ್ಯವಾಗುತ್ತವೆ. ಆದರೂ ಮಕ್ಕಳನ್ನು ಶಾಲೆಗೆ ಕಳಿಸಲಾರದಂಥ ಆರ್ಥಿಕ ಅಥವಾ ಇನ್ನಿತರ ಕೌಟುಂಬಿಕ ಸ್ಥಿತಿ ಇರಬಹುದಾದ ಕೆಲವು ಸಂದರ್ಭಗಳಲ್ಲಿ ಅವರಿಗೆ ಅಲ್ಪಸ್ವಲ್ಪ ಧನಸಹಾಯ ಮಾಡುವುದರ 

ಮೂಲಕ ಮಕ್ಕಳು ಶಾಲೆಗೆ ಹಾಜರಾಗುವಂತೆ ಮಾಡುವುದೂ ಅಗತ್ಯ. ಕೆಲವು ರಾಷ್ಟ್ರಗಳಲ್ಲಿ ಈ ಪದ್ಧತಿ ಪ್ರಚಾರದಲ್ಲಿದೆ. ಕಡ್ಡಾಯ ಶಿಕ್ಷಣದ ವಯೋಮಿತಿ ಯಲ್ಲಿರುವ ಮಕ್ಕಳನ್ನು ಅಂಗಡಿ, ಕಾರ್ಖಾನೆ, ಕಚೇರಿ, ಹೋಟೆಲು ಮುಂತಾದೆಡೆಗಳಲ್ಲಿ ಕೆಲಸಕ್ಕೆ 

ನೇಮಿಸಿಕೊಳ್ಳಕೂಡದೆಂಬ ರಾಜ್ಯಶಾಸನವೂ ಅಗತ್ಯವಾಗಿ ಆಗಬೇಕು. ಬಹುತೇಕ ದೇಶಗಳಲ್ಲಿ ಇಂಥ ಶಾಸನವೇನೊ ಆಚರಣೆಯಲ್ಲಿದೆ.
2. ಕಟ್ಟಡಗಳ ಅಭಾವ: ಕಡ್ಡಾಯ ಶಿಕ್ಷಣವೆಂದರೆ ಪ್ರಾಥಮಿಕ ಶಿಕ್ಷಣವನ್ನು ವಿಸ್ತರಿಸುವುದೇ ಆಗಿರುತ್ತದೆ. ಅದಕ್ಕೆ ಇರತಕ್ಕ ಸದ್ಯದ ಕಟ್ಟಡಗಳ ಸೌಲಭ್ಯ ಗಣನೀಯವಾಗಿ ಹೆಚ್ಚಬೇಕಾಗುತ್ತದೆ. ಅದಕ್ಕಾಗಿ ಹಣವನ್ನು ಒದಗಿಸಿದರೂ ಕಟ್ಟಡಗಳು ಶೀಘ್ರವಾಗಿ ನಿರ್ಮಾಣವಾಗುತ್ತಿಲ್ಲ. 

ಗ್ರಾಮಾಂತರ ಪ್ರದೇಶಗಳಲ್ಲಿ ಮುಖ್ಯವಾಗಿ ಅವನ್ನು ಕಟ್ಟಬೇಕಾಗಿರುವುದೂ ಆ ಕಾರ್ಯ ರಾಜ್ಯದ ಕಾಮಗಾರಿ ಇಲಾಖೆಯ ನೇತೃತ್ವದಲ್ಲಿ ನಡೆಯಬೇಕಾಗಿರುವುದೂ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಈ ತೊಂದರೆಯನ್ನು ನಿವಾರಿಸಲು ರಾಜ್ಯದ ಶಿಕ್ಷಣ ಶಾಖೆ ಅಥವಾ 

ಶಾಲಾಮಂಡಲಿ ತಾನೇ ಕಾಮಗಾರಿ ಇಲಾಖೆಯನ್ನು ಹೊಂದಿದ್ದು ಕಟ್ಟಡಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಸಾಗಿಸುವುದು ಅಗತ್ಯ. ನಗರಗಳಲ್ಲಂತು ವರ್ಷ ವರ್ಷಕ್ಕೂ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದ್ದರೂ ಅಲ್ಲಿನ ಶಾಲಾ ಕಟ್ಟಡಗಳನ್ನು 

ವಿಸ್ತರಿಸುವುದು ಸ್ಥಳಾಭಾವದಿಂದ ಅಸಾಧ್ಯವಾಗುತ್ತಿದೆ. ವಸತಿ ಸಮಸ್ಯೆ ತೀವ್ರವಾಗಿರುವ ಮೊಹಲ್ಲಗಳಲ್ಲಿ ಬಾಡಿಗೆ ಮನೆಗಳನ್ನು ದೊರಕಿಸಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲ. ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳಲ್ಲೂ ಸ್ಥಳಾಭಾವ ಇದ್ದೇ ಇದೆ. ಈ ತೊಂದರೆಯನ್ನು 

ತಪ್ಪಿಸಲು ಹೊಸದಾಗಿ ನಗರಗಳಲ್ಲಿ ಬಡಾವಣೆಗಳನ್ನು ನಿರ್ಮಿಸುವಾಗ ಶಾಲೆಗೆ ತಕ್ಕಷ್ಟು ನಿವೇಶನವನ್ನು ಬಿಡುವಂತೆ ಶಿಕ್ಷಣ ಶಾಖೆ ನೋಡಿಕೊಳ್ಳಬೇಕು. ತೀವ್ರ ಸ್ಥಳಾಭಾವವಿದ್ದು ತಕ್ಷಣಕ್ಕೆ ಪಕ್ಕಾ ಕಟ್ಟಡಗಳನ್ನು ರೂಪಿಸುವುದು ಅಸಾಧ್ಯವಾದೆಡೆ ಕಚ್ಚಾ ಕಟ್ಟಡಗಳನ್ನಾದರೂ 

ಕಟ್ಟಿಕೊಳ್ಳಬೇಕು.
3. ಉಪಕರಣಗಳ ಕೊರತೆ: ತೀವ್ರಗತಿಯಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿ ಸಂಖ್ಯೆಗನುಗುಣವಾಗಿ ಇರತಕ್ಕ ಶಾಲೆಗಳನ್ನು ವಿಸ್ತರಿಸುವಾಗ ಮತ್ತು ಹೊಸ ಶಾಲೆಗಳನ್ನು ತೆರೆಯುವಾಗ ಪೀಠೋಪಕರಣ, ಪಾಠೋಪಕರಣ, ಪುಸ್ತಕ ಇತ್ಯಾದಿಗಳನ್ನು ಒದಗಿಸುವುದು ಕಷ್ಟವಾಗುತ್ತದೆ. 

ಅದಕ್ಕಾಗಿ ಮೀಸಲಿಟ್ಟಿರುವ ಹಣವಿದ್ದರೂ ಕೊಳ್ಳಲು ಅವು ದೊರಕದಿರಬಹುದು. ಆದ್ದರಿಂದ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಒದಗಿಸುವುದು ಸಾಧ್ಯವಾಗದೆ ಕಡ್ಡಾಯ ಶಿಕ್ಷಣದ ವಿಸ್ತರಣ ಕಾರ್ಯ ಮಂದಗತಿ ತಾಳುತ್ತದೆ. ಅದನ್ನು ತಪ್ಪಿಸಲು ಶಿಕ್ಷಣಶಾಖೆ 

ಅದಕ್ಕಾಗಿ ತಕ್ಕಷ್ಟು ಹಣವನ್ನು ಮೀಸಲಿಡುವುದರ ಜೊತೆಗೆ ಅವನ್ನು ತಯಾರಿಸುವವರು ಸಕಾಲದಲ್ಲಿ ಸರಬರಾಜು ಮಾಡುವಂತೆಯೂ ನೋಡಿಕೊಳ್ಳಬೇಕು. ಅದು ಸಾಧ್ಯವಾಗದಾಗ ಸರ್ಕಾರವೇ ಅದಕ್ಕಾಗಿ ಕಾರ್ಖಾನೆಗಳನ್ನು ಆರಂಭಿಸಬೇಕು.
4. ಅಧ್ಯಾಪಕರ ಕೊರತೆ: ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಾಗ ಎಲ್ಲ ಕಡೆಯೂ ಅಧ್ಯಾಪಕರ ಕೊರತೆ ಕಂಡು ಬರುತ್ತದೆ. ಅದಕ್ಕಾಗಿ ಸದ್ಯದ ಅಧ್ಯಾಪಕ ಶಿಕ್ಞಣ ಸಂಸ್ಥೆಗಳನ್ನು ವಿಸ್ತರಿಸುವುದೂ ಹೊಸ ಸಂಸ್ಥೆಗಳನ್ನು ಆರಂಭಿಸುವುದೂ ನಡೆಯುತ್ತಿದೆ. ಆದರೂ ವೃತ್ತಿ 

ಶಿಕ್ಷಣ ಪಡೆದ ಅಧ್ಯಾಪಕರು ತಕ್ಕ ಸಂಖ್ಯೆಯಲ್ಲಿ ದೊರಕುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಅಲ್ಪಾವಧಿಯ ವೃತ್ತಿ ಶಿಕ್ಷಣದ ಕಾರ್ಯಕ್ರಮವನ್ನು ಆಚರಣೆಗೆ ತರಬಹುದು. ವೃತ್ತಿಶಿಕ್ಷಣ ದೊರಕಿಸುವ (ಅಂಥವರನ್ನು ಸರ್ಕಾರವೇ ವೃತ್ತಿ ಶಿಕ್ಷಣಕ್ಕೆ ಕಳಿಸಿ ಅಥವಾ ಸಂಜೆಯ 

ಅಥವಾ ಅಂಚೆ ಶಿಕ್ಷಣಕ್ಕೆ ಪ್ರೋತ್ಸಾಹಿಸಿ) ವ್ಯವಸ್ಥೆ ಮಾಡಬಹುದು. ಪ್ರಾಥಮಿಕ ಶಾಲೆಗಳಲ್ಲಿ ಕೆಲಸಕ್ಕೆ ಸೇರಲು ಅನೇಕರು ಇಷ್ಟಪಡುವುದಿಲ್ಲ. ಇದಕ್ಕೆ ಬಹುಕಾಲದಿಂದಲೂ ಆ ದರ್ಜೆಯ ಅಧ್ಯಾಪಕರಿಗೆ ನೀಡುತ್ತಿದ್ದ ಕಡಿಮೆ ಶ್ರೇಣಿಯ ಸಂಬಳವೇ ಮುಖ್ಯ ಕಾರಣ. ಈಚೆಗೆ 

ಅಭ್ಯರ್ಥಿಗಳನ್ನು ಈ ಸೇವಾಕ್ಷೇತ್ರಕ್ಕೆ ಆಕರ್ಷಿಸಲು ತಕ್ಕಮಟ್ಟಿಗೆ ಅವರ ಸಂಬಳ ಸಾರಿಗೆಗಳನ್ನು ಉತ್ತಮಪಡಿಸಲಾಗುತ್ತಿದೆ.
5. ಹಣದ ಅಭಾವ: ಎಲ್ಲ ದೇಶಗಳಲ್ಲೂ ಎಲ್ಲ ಕಾಲಗಳಲ್ಲೂ ಕಡ್ಡಾಯ ಶಿಕ್ಷಣಕ್ಕೆ ಅಡ್ಡಿ ಬರುತ್ತಿರುವ ಪ್ರಮುಖ ಅಂಶ ಆರ್ಥಿಕ ತೊಂದರೆ. ಅನೇಕ ದೇಶಗಳಲ್ಲಿ ಆದಾಯದ ಸು. 1/8 ಭಾಗ ಕಡ್ಡಾಯ ಶಿಕ್ಷಣಕ್ಕಾಗಿ ವಿನಿಯೋಗವಾಗುತ್ತಿದೆ. ರಾಷ್ಟ್ರದ ಇತರ ಕ್ಷೇತ್ರಗಳಲ್ಲಿ ಹೂಡಿದ 

ಹಣದಂತೆ ಈ ಕ್ಷೇತ್ರದಲ್ಲಿ ಹೂಡುವ ಹಣದಿಂದ ಪ್ರತಿಫಲ ತಕ್ಷಣ ದೊರಕುವಂತಿಲ್ಲ. ಆದರೆ ರಾಷ್ಟ್ರದ ವಿವಿಧ ಉದ್ಯಮಗಳಿಗೆ ತಜ್ಞರನ್ನು ಒದಗಿಸಿ ಆರ್ಥಿಕ ಶಕ್ತಿಯನ್ನು ಉತ್ತಮಪಡಿಸುವ ಕಾರ್ಯದಲ್ಲಿ ಅದು ಖಂಡಿತವಾಗಿ ಪಾತ್ರವಹಿಸುತ್ತದೆ. ಆದ್ದರಿಂದ ತನ್ನ ಪುರೋಭಿವೃದ್ಧಿಯ 

ದೃಷ್ಟಿಯಿಂದಲೇ ರಾಷ್ಟ್ರ ಎಲ್ಲ ಸಂಪನ್ಮೂಲಗಳಿಂದಲೂ ಅದಕ್ಕಾಗಿ ಹಣ ಒದಗಿಸಿಕೊಳ್ಳುವುದು ಅಗತ್ಯವಾಗುತ್ತದೆ.
6. ಕಡ್ಡಾಯ ಶಿಕ್ಷಣದಲ್ಲಿ ನಿಲುಗಡೆಯ ಸಮಸ್ಯೆ: ಒಂದೇ ತರಗತಿಯಲ್ಲಿ ವಿದ್ಯಾರ್ಥಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಉಳಿಯುವುದನ್ನು ನಿಲುಗಡೆ ಅಥವಾ ಕುಂಟಿಕೆ ಎನ್ನುವರು. ಇದರ ಫಲವಾಗಿ ಶಿಕ್ಷಣ ಕ್ಷೇತ್ರಕ್ಕೆ ಅನಗತ್ಯವಾಗಿ ಅಧಿಕ ವ್ಯಯವಾಗುವುದಲ್ಲದೆ 

ನಿಯಮಿತಕಾಲಕ್ಕೆ ಶಾಲೆಯನ್ನು ಬಿಡತಕ್ಕವರು ಪ್ರಾಥಮಿಕ ಶಿಕ್ಷಣವನ್ನು ಪುರ್ಣವಾಗಿ ಮುಗಿಸಲಾರದೆ ಮುಂದೆ ನಿರಕ್ಷರತೆಗೆ ಬೀಳುವರು. ಇದರಿಂದ ಕಡ್ಡಾಯ ಶಿಕ್ಷಣದ ಉದ್ದೇಶವೇ ವಿಫಲವಾಗುವುದು. ಭಾರತದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ನಿಲುಗಡೆಯ ಸಮಸ್ಯೆ 

ತೀವ್ರವಾಗಿದೆ.
7. ಕಡ್ಡಾಯ ಶಿಕ್ಷಣದಲ್ಲಿ ವ್ಯರ್ಥವ್ಯಯ: ಶಾಲೆಗೆ ಸೇರಿದ ಮಕ್ಕಳು ನಿಯತಕಾಲಾವಧಿಯವರೆಗೆ ಶಿಕ್ಷಣ ಪಡೆಯದೆ ಮಧ್ಯೆ ಶಾಲೆಯನ್ನು ಬಿಡುವುದರಿಂದ ಅವರು ಮರಳಿ ನಿರಕ್ಷರತೆಗೆ ಬೀಳುವರು. ಇದನ್ನು ಶಿಕ್ಷಣದಲ್ಲಾಗುವ ವ್ಯರ್ಥವ್ಯಯ (ಅಪವ್ಯಯ, ನಷ್ಟ, ವೇಸ್ಟೇಜ್) 

ಎನ್ನುವರು. ಕಡ್ಡಾಯ ಶಿಕ್ಷಣ ಆಚರಣೆಯಲ್ಲಿರುವೆಡೆ ಮಕ್ಕಳು ನಿಯಮಿತ ಕಾಲದ ಅನಂತರ ಶಾಲೆಯನ್ನು ಬಿಡುವ ಸಂದರ್ಭದಲ್ಲೂ ನಿಲುಗಡೆಯಿಂದ ಇಂಥ ವ್ಯರ್ಥ ವ್ಯಯ ಸಂಭವಿಸುವುದು. ಹೇಗೇ ಆಗಲಿ ಭಾರತದಲ್ಲಿ ನಿಲುಗಡೆಯಂತೆ ವ್ಯರ್ಥ ವ್ಯಯವೂ ಅಧಿಕವಾಗಿದೆ. 

ಈಚೆಗೆ ಮಹಾರಾಷ್ಟ್ರದಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಶಾಲೆಗೆ ಸೇರಿದ 1,000 ಮಂದಿಯಲ್ಲಿ ನಾಲ್ಕನೆಯ ತರಗತಿಯನ್ನೇ ಮುಗಿಸುವ ಮುನ್ನ 414 ಮಂದಿ ಶಾಲೆಯನ್ನು ಬಿಟ್ಟು ಬಿಟ್ಟಿದ್ದರು. ಇಡೀ ರಾಷ್ಟ್ರದಲ್ಲೇ ಇಷ್ಟೊ, ಇನ್ನೂ ಹೆಚ್ಚಿನ ಪ್ರಮಾಣದಲ್ಲೊ ಅಪವ್ಯಯ 

ನಡೆಯುತ್ತಿದೆ. ಭಾರತದ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ನಷ್ಟದ ತೀವ್ರ ಸ್ವರೂಪವನ್ನು ಮೊದಲು ಹರ್ಟಾಗ್ ಸಮಿತಿ ಎತ್ತಿ ತೋರಿಸಿತು.
ನಿಲುಗಡೆ ಮತ್ತು ವ್ಯರ್ಥವ್ಯಯಗಳಿಗೆ ಮುಖ್ಯವಾಗಿ (1) ಮೊದಲನೆಯ ತರಗತಿಗೆ ಬೇರೆ ಬೇರೆ ವಯಸ್ಸಿನ ಮಕ್ಕಳನ್ನು ಸೇರಿಸುವುದು, (2) ವರ್ಷದ ಮಧ್ಯದಲ್ಲಿ ತರಗತಿಗೆ ಸೇರಿಸಿಕೊಳ್ಳುವುದು, (3) ತರಗತಿಗೆ ಮಕ್ಕಳು ಸರಿಯÁಗಿ ಹಾಜರಾಗದಿರುವುದು, (4) ಶಾಲೆಯಲ್ಲಿ 

ತಕ್ಕಷ್ಟು ಉಪಕರಣಾದಿಗಳು ಇಲ್ಲದಿರುವುದು, (5) ತರಗತಿಗೆ ಮಿತಿ ಮೀರಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು, (6) ಸಾಮಾನ್ಯ ಮಕ್ಕಳಿಗೆ ಆಕರ್ಷಣೀಯವಾಗಿರದ ಪಠ್ಯಕ್ರಮ,  (7) ಅಧ್ಯಾಪಕರು ಅನುಸರಿಸುವ ಬೇಸರ ಹುಟ್ಟಿಸುವ ಬೋಧನ ಕ್ರಮ (8) ಅಧ್ಯಾಪಕರಿಗೆ 

ತಕ್ಕಷ್ಟು ಶಿಕ್ಷಣ ಸಂಸ್ಕಾರಗಳಿಲ್ಲದಿರುವಿಕೆ-ಇವು ಕಾರಣವೆನಿಸುತ್ತವೆ. ಕಡ್ಡಾಯ ಶಿಕ್ಷಣದ ಉದ್ದೇಶ ಈಡೇರಬೇಕಾದರೆ ಈ ನ್ಯೂನತೆಗಳನ್ನು ನಿವಾರಿಸುವುದರ ಜೊತೆಗೆ ಒಂದನೆಯ ತರಗತಿಯಲ್ಲಿ ಪರೀಕ್ಷೆ ನಡೆಸದೆ ಮುಂದಕ್ಕೆ ತೇರ್ಗಡೆ ಮಾಡಿಸುವುದೂ ಶಾಲೆಗೆ ಸೇರುವ 

ಒಂದು ವರ್ಷದ ಶಿಶುವಿಹಾರದಲ್ಲಿ ಶಿಕ್ಷಣ ನೀಡುವುದೂ ಅಗತ್ಯ.
ಪ್ರಾಥಮಿಕ ಮಟ್ಟದ ಶಿಕ್ಷಣದಲ್ಲಾಗುವ ನಿಲುಗಡೆಗೂ ಅದರ ಫಲವಾಗಿ ಉದ್ಭವಿಸುವ ಶಿಕ್ಷಣದ ಅಪವ್ಯಯಕ್ಕೂ ಜನತೆಯ ಬಡತನ ಪ್ರಮುಖ ಕಾರಣ. ಅದರ ಫಲವಾಗಿ ಶೇ.65ರಷ್ಟು ಅಪವ್ಯಯ ಸಂಭವಿಸುತ್ತಿದೆ. 9-10 ವರ್ಷದ ಮಕ್ಕಳು ಹೊಲಗದ್ದೆಗಳಲ್ಲೂ 

ಅಂಗಡಿಮುಂಗಟ್ಟುಗಳಲ್ಲೂ ತಂದೆತಾಯಿಗಳಿಗೆ ಜೀವನೋಪಾಯದ ಕಸಬಿನಲ್ಲಿ ನೆರವಾಗಲು ಶಾಲೆಗೆ ತಪ್ಪಿಸಿಕೊಳ್ಳುವರು. ತಂದೆತಾಯಿಗಳು ಅನಿವಾರ್ಯದ ಈ ಕಾರಣಕ್ಕಾಗಿ ಮಕ್ಕಳನ್ನು ಶಾಲೆಗೆ ಕಳಿಸದೆ ಉಳಿಸಿಕೊಳ್ಳುವರು. ಅಂಥ ಮಕ್ಕಳು ನಿರಕ್ಷರತೆಗೆ ಮರಳಿ, 

ಶಿಕ್ಷಣದಲ್ಲಿ ಅಧಿಕ ಪ್ರಮಾಣದಲ್ಲಿ ವ್ಯರ್ಥವ್ಯಯ ಸಂಭವಿಸುವುದು. ಅಂಥ ಮಕ್ಕಳಿಗೆ, ಅವರಿಗೆ ಅನುಕೂಲವಾಗುವ ವೇಳೆಯಲ್ಲಿ ಭಾಗಶಃ ಕಾಲದ ಶಿಕ್ಷಣ ಸೌಲಭ್ಯವನ್ನು ಒದಗಿಸುವುದರಿಂದ ಅದನ್ನು ಬಹುಮಟ್ಟಿಗೆ ನಿವಾರಿಸಬಹುದು. ಕಡ್ಡಾಯ ಶಿಕ್ಷಣದ ಅವಧಿಯ ಅನಂತರ 

ಅದನ್ನು ಪುರ್ಣಾವಧಿಯವರೆಗೆ ಮುಗಿಸಿದವರಿಗೂ ಒಂದು ವರ್ಷದ ಭಾಗಶಃ ಕಾಲಕ ಶಿಕ್ಷಣವನ್ನು ಕಡ್ಡಾಯ ಮಾಡುವುದೂ ಅಗತ್ಯ. ಇಂಥ ತರಗತಿಗಳನ್ನು ನಡೆಸಲು ಅಷ್ಟಾಗಿ ಹಣ ಖರ್ಚಾಗದಿದ್ದರೂ ಅದರಿಂದಾಗುವ ಪ್ರತಿಫಲ ಗಣನೀಯವಾಗಿರುತ್ತದೆ. ಇತ್ತೀಚೆಗೆ 

ರಚನೆಯಾಗಿದ್ದ ಕೊಠಾರಿ ಶಿಕ್ಷಣ ಆಯೋಗವೂ ತನ್ನ ವರದಿಯಲ್ಲಿ ಇಂಥ ಸಲಹೆಯೊಂದನ್ನು ಸೇರಿಸಿದೆ. ಕೇವಲ ನಾಲ್ಕು ವರ್ಷಗಳ ಕಡ್ಡಾಯ ಶಿಕ್ಷಣವಿರುವ ದೇಶಗಳಲ್ಲಿ ಅದನ್ನು ಮುಗಿಸಿದ ಮೇಲೆ ಕೆಲಸಕ್ಕೆ ಸೇರಿಕೊಳ್ಳುವ ಮಕ್ಕಳು ಬಹುಬೇಗ ನಿರಕ್ಷರತೆಗೆ ತುತ್ತಾಗುವರು. 

ಅದು ತನಕ ಅವರು ಕಲಿತಿರುವುದನ್ನು ಮರೆಯದಿರಬೇಕಾದರೆ ಉದ್ಯೋಗ ನಿರತರಾದ ಮೇಲೂ ಅವರಿಗೆ ಕೆಲವು ವರ್ಷಗಳ ಭಾಗಶಃ ಶಿಕ್ಷಣವನ್ನು ಕಡ್ಡಾಯ ಮಾಡುವುದು ಅಗತ್ಯ. ಅಲ್ಲಿ ಅವರಿಗೆ ಅನುಕೂಲಿಸುವಂತೆ ಪಠ್ಯಕ್ರಮ, ಬೋಧನವಿಧಾನ, ಕಾರ್ಯಸೂಚಿ 

ಮುಂತಾದುವನ್ನು ರೂಪಿಸಿಕೊಳ್ಳಬಹುದು. ಅಪವ್ಯಯದ ಇನ್ನುಳಿದ ಶೇ. 35ರಷ್ಟು ಭಾಗ ಸಾಮಾಜಿಕ ಮತ್ತು ಶೈಕ್ಷಣಿಕ ಕಾರಣಗಳಿಂದ ಸಂಭವಿಸುವುದು. ಕೆಲವು ಹಳ್ಳಿಗಳ ಶಾಲೆಗಳಲ್ಲಿ ಮೊದಲು ಎರಡು ಮೂರು ತರಗತಿಗಳು ಮಾತ್ರವಿದ್ದು ಮೇಲಿನ ತರಗತಿಗಳು ಪಕ್ಕದ 

ಹಳ್ಳಿಯ ಶಾಲೆಯಲ್ಲಿರುವಾಗ ಮಕ್ಕಳು ಅಲ್ಲಿಗೆ ಹೋಗಲಾರದೆ ಶಿಕ್ಷಣವನ್ನು ಅಲ್ಲಿಗೇ ಮುಗಿಸುವರು; ಹೆಣ್ಣು ಮಕ್ಕಳನ್ನು ಅನೇಕ ಕಡೆ ಪ್ರಾಥಮಿಕ ಶಾಲೆಯ ಕೊನೆಯ ಹಂತದವರೆವಿಗೂ ಕಳಿಸಲು ತಂದೆತಾಯಿಗಳು ಆಶಿಸುವುದಿಲ್ಲ. ಈ ಎರಡು ಕಾರಣಗಳಿಂದಾಗುವ 

ಅಪವ್ಯಯವನ್ನು ನಿಲ್ಲಿಸಲು ಶಾಲೆಗಳ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದು ಗ್ರಾಮಾಂತರ ಪ್ರದೇಶಗಳ ಜನತೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಆವಶ್ಯಕತೆಯ ಬಗ್ಗೆ ಪ್ರಚಾರ ಮಾಡುವುದೂ ಅಗತ್ಯ.
ನಿಲುಗಡೆ ಮತ್ತು ಅಪವ್ಯಯ-ಇವೆರಡೂ ಅವಷ್ಟಕ್ಕೇ ತಲೆನೋವು ಜ್ವರಗಳಂತೆ ಬೇನೆಯಲ್ಲ-ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸೂಚಿಸುವ ಪರಿಣಾಮಗಳು ಮಾತ್ರ. ಆದ್ದರಿಂದ ಮೇಲೆ ಸೂಚಿಸಿರುವಂತೆ ಅವನ್ನು ಮೂಡಿಸುವ ಕಾರಣಗಳನ್ನು ನಿವಾರಿಸುವುದು 

ಅಗತ್ಯ.
ಪಂಚವಾರ್ಷಿಕ ಯೋಜನೆಗಳಲ್ಲಿ ಕಡ್ಡಾಯ ಶಿಕ್ಷಣದ ಪ್ರಗತಿ: ಇಡೀ ಭಾರತದಲ್ಲಿ ಪ್ರಾಥಮಿಕ 1-4 ತರಗತಿಗಳಲ್ಲಿ ಮೊದಲು ಮೂರು ಯೋಜನೆಗಳಲ್ಲಿ ಮಕ್ಕಳ ದಾಖಲಾತಿ ಶೀಘ್ರಗತಿಯಿಂದಲೇ ಸಾಗಿತು. 1950-51ರಲ್ಲಿ 1.4 ಕೋಟಿ ಮಕ್ಕಳ ಸಂಖ್ಯೆ 1965-66ರಲ್ಲಿ 3.7 

ಕೋಟಿಗೇರಿತು. ಎಂದರೆ ರಾಜ್ಯಾಂಗ ರಚನೆಯಾದ 15 ವರ್ಷಗಳಲ್ಲಿ ದಾಖಲಾತಿ 3 ಪಟ್ಟು ಹೆಚ್ಚಿತು. ಮೊದಲ ಯೋಜನೆಯಲ್ಲಿ ಪ್ರತಿವರ್ಷವೂ ಆ ವಯೋಮಿತಿಯ ಮಕ್ಕಳಲ್ಲಿ ಸರಾಸರಿ ಶೇ. 4.9ರಷ್ಟು ಮಕ್ಕಳೂ ಎರಡನೆಯ ಯೋಜನೆಯಲ್ಲಿ ಪ್ರತಿವರ್ಷವೂ ಸರಾಸರಿ ಶೇ. 

7.5ರಷ್ಟು ಮಕ್ಕಳೂ ಮೂರನೆಯ ಯೋಜನೆಯಲ್ಲಿ ಪ್ರತಿವರ್ಷವೂ ಸರಾಸರಿ ಶೇ. 8.2ರಷ್ಟು ಮಕ್ಕಳೂ ಹೆಚ್ಚಿಗೆ ಸೇರುತ್ತ ಹೋದರು. ನಾಲ್ಕನೆಯ ಯೋಜನೆಯಲ್ಲೂ ದಾಖಲಾತಿ ಇದೇ ವೇಗದಲ್ಲಿ ಮುಂದುವರಿದು 1970-71ರ ವೇಳೆಗೆ ಒಟ್ಟು ಮಕ್ಕಳ ಸಂಖ್ಯೆ 6 

ಕೋಟಿಗೇರಿರುವುದು. ಎಂದರೆ ಆ ವಯೋಮಿತಿಯ ಮಕ್ಕಳಲ್ಲಿ ಶೇ. 84ರಷ್ಟು ಕಡ್ಡಾಯ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.
ಪ್ರಾಥಮಿಕ 5-7ನೆಯ ತರಗತಿಗಳಲ್ಲಿ ದಾಖಲಾತಿ ಮೊದಲ ಯೋಜನೆಯಲ್ಲಿ ತೀವ್ರಗತಿಯಲ್ಲಿ ಸಾಗಿದರೂ ಅನಂತರದ ಯೋಜನೆಗಳಲ್ಲಿ ಮಂದಗತಿಯನ್ನು ತಾಳಿತು. 1950-51ರಲ್ಲಿದ್ದ 30 ಲಕ್ಷ ಮಕ್ಕಳ ಸಂಖ್ಯೆ 1965-66ರಲ್ಲಿ 130 ಲಕ್ಷಕ್ಕೇರಿತು. ಎಂದರೆ ಹದಿನೈದು ವರ್ಷಗಳಲ್ಲಿ 

ಮಕ್ಕಳ ಸೇರ್ಪಡೆ ನಾಲ್ವಡಿ ಹೆಚ್ಚಿತು. ಮೊದಲ ಯೋಜನೆಯಲ್ಲಿ ಪ್ರತಿ ವರ್ಷವೂ ಆ ವಯೋಮಿತಿಯ ಮಕ್ಕಳಲ್ಲಿ ಸರಾಸರಿ ಶೇ. 7.6ರಷ್ಟೂ ಎರಡನೆಯ ಯೋಜನೆಯಲ್ಲಿ ಪ್ರತಿವರ್ಷವೂ ಶೇ. 10.2ರಷ್ಟೂ ಮೂರನೆಯ ಯೋಜನೆಯಲ್ಲಿ ಶೇ.11.0ರಷ್ಟೂ ಮಕ್ಕಳು ಕಡ್ಡಾಯ ಶಿಕ್ಷಣದ 

ವ್ಯಾಪ್ತಿಗೆ ಹೊಸದಾಗಿ ಒಳಪಡುತ್ತ ಬಂದರು. ಇದೇ ಪ್ರಗತಿಯ ವೇಗ ನಾಲ್ಕನೆಯ ಯೋಜನೆಯಲ್ಲೂ ಮುಂದುವರಿದು 1970-71ರಲ್ಲಿ 200 ಲಕ್ಷ ಮಕ್ಕಳು ಕಡ್ಡಾಯ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಆದರೂ ಈ ವಯೋಮಿತಿಯ ಮಕ್ಕಳಲ್ಲಿ ಈಗ ಕೇವಲ ಸು. ಶೇ. 50ರಷ್ಟು 

ಮಾತ್ರ ಕಡ್ಡಾಯ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಕೆಲವು ರಾಜ್ಯಗಳಲ್ಲಿ ಕಡ್ಡಾಯ ಶಿಕ್ಷಣವನ್ನು 5-7ರ ವಯೋಮಿತಿಗೆ ಇನ್ನೂ ವಿಸ್ತರಿಸದಿರುವುದೇ ಇದಕ್ಕೆ ಕಾರಣ.
ಕರ್ನಾಟಕದಲ್ಲಿ ಕಡ್ಡಾಯ ಶಿಕ್ಷಣದ ಪ್ರಗತಿ: ಕರ್ನಾಟಕ ರಾಜ್ಯದಲ್ಲಿ ಕಡ್ಡಾಯ ಶಿಕ್ಷಣದಲ್ಲಿ ಆಸಕ್ತಿ 1914ರಿಂದಲೇ ಆರಂಭವಾಯಿತು. ಆದರೆ ದ್ರವ್ಯಾಭಾವದಿಂದ ಅದನ್ನು ಆಚರಣೆಗೆ ತರಲಾಗಲಿಲ್ಲ. 1944ರಲ್ಲಿ ರಾಜ್ಯ ಸರ್ಕಾರ ಅದನ್ನು ಆಚರಣೆಗೆ ತರುವ ಉದ್ದೇಶದಿಂದ 

ಶಾಸನವೊಂದನ್ನು ಮಾಡಿತು. ಅದರಂತೆ 6-10ರ ವಯೋಮಿತಿಯವರೆಗಿನ ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯವಾಯಿತು. 1945-46ರಿಂದ ಜಿಲ್ಲೆಗೆ ಒಂದರಂತೆ 9 ತಾಲ್ಲೂಕುಗಳಲ್ಲಿ ಯೋಜನೆಯನ್ನು ಆಚರಣೆಗೆ ತರಲಾಯಿತು. ಅನಂತರ ಯೋಜನೆಯನ್ನು 

ಪ್ರತಿವರ್ಷವೂ ಒಂದೊಂದು ತಾಲ್ಲೂಕಿಗೆ ವಿಸ್ತರಿಸುವ ಯತ್ನ ನಡೆಯಿತು. ಕಡೆಗೆ 30 ತಾಲ್ಲೂಕುಗಳಿಗೆ ವಿಸ್ತರಿಸುವ ವೇಳೆಗೆ ಯೋಜನೆ ಕಾರ್ಯರೂಪದಲ್ಲಿ ಫಲಕಾರಿಯಾಗ ದಿರುವುದು ಕಂಡುಬಂತು. 1949ರ ಅನಂತರ ಅದನ್ನು ವಿಸ್ತರಿಸುವುದು ನಿಂತಿತು. ಮುಂದೆ ಈ 

ಯೋಜನೆ 1961ರ ವರೆಗೆ ಕೇವಲ 9 ಜಿಲ್ಲೆಗಳಲ್ಲಿ ಮಾತ್ರ ಆಚರಣೆಯಲ್ಲಿತ್ತು.
ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ 1947ರ ಮುಂಬೈ ಕಡ್ಡಾಯ ಶಿಕ್ಷಣ ಕಾಯಿದೆಯನ್ವಯ ಯೋಜನೆ ಆಗಲೇ ಜಾರಿಗೆ ಬಂದಿತ್ತು. 1,000 ಮತ್ತು ಅದಕ್ಕೂ ಹೆಚ್ಚಿನ ಜನಸಂಖ್ಯೆಯ ಊರುಗಳಿಗೆ ಮಾತ್ರ ಅದನ್ನು ಅನ್ವಯಿಸಲಾಗಿತ್ತು. ಮೊದಲ ವರ್ಷ 7-8 ವಯೋಮಿತಿಯ 

ಮಕ್ಕಳಿಗೂ ಎರಡನೆಯ ವರ್ಷ 8-9 ವಯೋಮಿತಿಯವರೆಗೂ...ಹೀಗೆ ವಿಸ್ತರಿಸುತ್ತ ನಾಲ್ಕು ವರ್ಷಗಳಲ್ಲಿ 7-11 ವಯೋಮಿತಿಯ ಮಕ್ಕಳನ್ನೆಲ್ಲ ಅದರ ವ್ಯಾಪ್ತಿಯಲ್ಲಿ ತರಲಾಯಿತು.
ಮದರಾಸು ಕರ್ನಾಟಕದ ಜಿಲ್ಲೆಗಳಲ್ಲಿ ಮದ್ರಾಸಿನ 1920ರ ಕಡ್ಡಾಯ ಶಿಕ್ಷಣ ಶಾಸನದನ್ವಯ ಯೋಜನೆಯನ್ನು ಆಯ್ದ ಕೆಲವು ಪ್ರದೇಶಗಳಲ್ಲಿ ಮಾತ್ರ ಆಚರಣೆಗೆ ತರಲಾಗಿತ್ತು. ಕಾರ್ಯರೂಪದಲ್ಲಿ ಅದೂ ಫಲಕಾರಿಯೆನಿಸಲಿಲ್ಲ.
ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ 1952ರ ಹೈದರಾಬಾದ್ ಕಡ್ಡಾಯ ಶಿಕ್ಷಣ ಯೋಜನೆ ಆಚರಣೆಗೆ ಬಂದಿತ್ತು. ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ಹಂತಹಂತವಾಗಿ ವಿಸ್ತರಿಸಲಾಗುತ್ತಿತ್ತು.
ಕೊಡಗು ಪ್ರಾಂತದಲ್ಲಿ 1961ಕ್ಕೆ ಹಿಂದೆ ಕಡ್ಡಾಯ ಶಿಕ್ಷಣ ಆಚರಣೆಯಲ್ಲಿರಲಿಲ್ಲ.
ವಿಶಾಲ ಮೈಸೂರಿನ ಎಲ್ಲ ಭಾಗಗಳಿಗೂ ಅನ್ವಯಿಸುವಂತೆ 1961ರಲ್ಲಿ ಕಡ್ಡಾಯ ಶಿಕ್ಷಣದ ರಾಜ್ಯ ಶಾಸನವಾಯಿತು. 1961-62ರಲ್ಲಿ 6-7 ವಯಸ್ಸಿನವರಿಗೂ 1962-63ರಲ್ಲಿ 6-8 ವಯಸ್ಸಿನವರಿಗೂ 1963-64ರಲ್ಲಿ 6-9 ವಯಸ್ಸಿನವರಿಗೂ 1964-65ರಲ್ಲಿ 6-10 ವಯಸ್ಸಿನವರಿಗೂ 

1965-66ರಲ್ಲಿ 9-11 ವಯಸ್ಸಿನವರಿಗೂ ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಮೂರನೆಯ ಪಂಚವಾರ್ಷಿಕ ಯೋಜನೆಯ ಕೊನೆಯ ಹೊತ್ತಿಗೆ 6-11 ವಯೋಮಿತಿಯ ಮಕ್ಕಳಿಗೆಲ್ಲ ಶಿಕ್ಷಣ ಕಡ್ಡಾಯವಾಯಿತು. ಈ ಶಾಸನದ ಪ್ರಕಾರ (1) ನಿಷ್ಕರ್ಷಿಸಿರುವ (6-14ರ) 

ವಯೋಮಿತಿಯ ಮಕ್ಕಳಿಗೆ ಶಿಕ್ಷಣ ಉಚಿತ; (2) ಆ ವಯೋಮಿತಿಯಲ್ಲಿರುವ ಮಕ್ಕಳೆಲ್ಲ ಶಾಲೆಗೆ ಸೇರಬೇಕು; (3) ವಯೋಮಿತಿಯ ಕೊನೆಯನ್ನು ಮುಟ್ಟುವವರೆಗೆ ಮಕ್ಕಳನ್ನು ತಂದೆತಾಯಿಗಳು ಶಾಲೆಯಿಂದ ಬಿಡಿಸಬಾರದು; (4) ಆ ವಯೋಮಿತಿಯ ಮಕ್ಕಳನ್ನು ಕೆಲಸಕ್ಕೆ 

ನೇಮಿಸಿಕೊಂಡು ಯಾರೂ ಅವರ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಮೇಲಿನ 2, 3, 4ನೆಯ ಅಂಶಗಳನ್ನು ಉಲ್ಲಂಘಿಸಿದವರು ಶಿಕ್ಷಾರ್ಹರಾಗುವರು. ಮಕ್ಕಳ ವಾಸದ ಮನೆಗೆ ಒಂದು ಕಿಮೀ ಹತ್ತಿರದಲ್ಲಿ ಶಾಲೆಯಿಲ್ಲದ್ದಿದ್ದರೆ, ಒಂದು ಕಿಮೀ ಒಳಗಿರುವ ಶಾಲೆಯಲ್ಲಿ ತಂದೆತಾಯಿಗಳ 

ಧಾರ್ಮಿಕ ನಂಬಿಕೆಗೆ ವಿರುದ್ಧವಾದ ಧಾರ್ಮಿಕ ಶಿಕ್ಷಣ ಕಡ್ಡಾಯ ಮಾಡಿದ್ದರೆ, ಅಂಗೀಕರಿಸಿದ ಶಿಕ್ಷಕರಿಂದ ಮನೆಯಲ್ಲಿ ಪಾಠ ಮಾಡಲು ಏರ್ಪಾಡು ಮಾಡಿಕೊಂಡಿದ್ದರೆ, ಕಾಯಿಲೆ, ಸಾಂಕ್ರಾಮಿಕ ರೋಗ, ಗಲಭೆ, ನೈಸರ್ಗಿಕ ಕ್ಷೋಭೆ ಇತ್ಯಾದಿಗಳು ತಲೆದೋರಿದ್ದರೆ, ಮಕ್ಕಳಲ್ಲಿ 

ಮಾನಸಿಕ ಅಥವಾ ಹಾಜರಾಗದಿರಬಹುದಾದ ಬಗ್ಗೆ ವಿನಾಯಿತಿ ನೀಡಲು ಶಾಸನದಲ್ಲಿ ಅವಕಾಶ ಕಲ್ಪಿಸಿದೆ.
ಕರ್ನಾಟಕ ರಾಜ್ಯ 1968-69ರಲ್ಲಿ 6-11ರ ವಯೋಮಿತಿಯ ಮಕ್ಕಳಲ್ಲಿ ಶೇ.85ರಷ್ಟು ಮಕ್ಕಳನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಈ ಪ್ರಮಾಣ ನಗರಗಳಲ್ಲಿ ಸ್ವಲ್ಪ ಹೆಚ್ಚಾಗಿಯೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಲ್ಪ ಕಡಿಮೆಯಾಗಿಯೂ 

ಇದೆ. ಅಲ್ಲದೆ ಗಂಡುಮಕ್ಕಳ ಸೇರ್ಪಡೆಯ ಪ್ರಮಾಣ ಹೆಣ್ಣು ಮಕ್ಕಳ ಸೇರ್ಪಡೆಯ ಪ್ರಮಾಣಕ್ಕಿಂತ ಹೆಚ್ಚಾಗಿದೆ.
ಕಡ್ಡಾಯ ಶಿಕ್ಷಣದ ಯಶಸ್ಸು ಮೂರು ಅಂಶಗಳನ್ನು ಅವಲಂಬಿಸಿದೆ. ಮೊದಲನೆಯದಾಗಿ ಪ್ರತಿ ಮಗುವೂ ಹೋಗಿ ಬರಲು ಅನುಕೂಲವಾದಷ್ಟು ಹತ್ತಿರದಲ್ಲಿ ಶಾಲೆಯಿರಬೇಕು; ಎರಡನೆಯದಾಗಿ, ನಿಯಮಿತ ವಯೋಮಿತಿಯ ಮಕ್ಕಳೆಲ್ಲ ಶಾಲೆಗೆ ಸೇರುವಂತೆ ಪ್ರಚಾರ, 

ಒತ್ತಾಯ ಅಗತ್ಯವೆನಿಸಿದರೆ ಸಂಬಂಧಿಸಿದವರಿಗೆ ದಂಡ__ಈ ಎಲ್ಲ ವಿಧಾನಗಳನ್ನೂ ಅನುಸರಿಸುವುದರ ಮೂಲಕ ಪ್ರಯತ್ನಿಸಬೇಕು. ಕೊನೆಯದಾಗಿ, ಒಮ್ಮೆ ಶಾಲೆಗೆ ಸೇರಿದ ಮಕ್ಕಳು ನಿಗದಿ ಮಾಡಿರುವ ವಯಸ್ಸು ತುಂಬುವವರೆಗೆ ಕ್ರಮವಾಗಿ ಹಾಜರಾಗುತ್ತಿರುವಂತೆ 

ನೋಡಿಕೊಳ್ಳಬೇಕು.                           	(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ